ಜನಪದ ಜ್ಯೋತಿಷ್ಯ -
ಹಳ್ಳಿಯ ಜನ ಬಿತ್ತುವಾಗ ಒಕ್ಕುವಾಗ ಮದುವೆ ಮುಂಜಿ ಮಾಡುವಾಗ ದೊಡ್ಡ ವ್ಯಾಪಾರ ವಹಿವಾಟು ಮಾಡುವಾಗ ಆಕಸ್ಮಿಕಗಳೊದಗಿ ತೀರ ತೊಂದರೆಗಳುಂಟಾದಾಗ ವ್ಯಾಕುಲರಾಗಿ ಭವಿಷ್ಯ ತಿಳಿಯಲು ಜೋಯಿಸರನ್ನೋ ಪೂಜಾರಿಯನ್ನೋ ನೋಡುತ್ತಾರೆ. ಆತ ಪಂಚಾಂಗ ನೋಡಿ ಅವರ ಗ್ರಹಗತಿಗಳು ಹೇಗಿವೆ ಎಂಬುದನ್ನು ಹೇಳುತ್ತಾನೆ. ಇಂಥ ಜ್ಯೋತಿಷ್ಯವನ್ನು ಸಂಪೂರ್ಣವಾಗಿ ಜನಪದ ಜ್ಯೋತಿಷ್ಯ ಎನ್ನಲಾಗುವುದಿಲ್ಲ. ಶುದ್ಧ ಜನಪದ ಎಂದು ಕರೆಯಬಹುದಾದಂಥವು ಎಂದರೆ ಕವಡೆಶಾಸ್ತ್ರ. ಓಲೆಗರಿ ಶಾಸ್ತ್ರ, ಗಿಣಿಶಾಸ್ತ್ರ, ಕೊರವಂಜಿ, ಕುರುಮಾಮ ಮುಂತಾದವು.

ಕವಡೆಶಾಸ್ತ್ರ : ಈ ಶಾಸ್ತ್ರ ಹೇಳುವವರು ಜ್ಯೋತಿಷ್ಯ ಕೇಳಲು ಬಂದವರ ಕೈಯಲ್ಲಿ ಹತ್ತಿಪ್ಪತ್ತು ಕವಡೆಗಳನ್ನು ಕೊಟ್ಟು ಬಿಡಲು ಹೇಳುತ್ತಾರೆ. ಬಿಟ್ಟ ಕವಡೆಗಳನ್ನು ಎಣಿಸಿ ಸರಿಯೊ ಬೆಸವೊ ಎಂಬುದನ್ನು ಲೆಕ್ಕಾಚಾರಹಾಕಿ ಅದಕ್ಕನುಗುಣವಾಗಿ ಒಳ್ಳೆಯದು ಕೆಟ್ಟದ್ದರ ಬಗ್ಗೆ ಸೂಚನೆ ಕೊಡುತ್ತಾರೆ.

ಓಲೆಗರಿಶಾಸ್ತ್ರ : ಜ್ಯೋತಿಷಿಯ ಬಳಿ ಓಲೆಗರಿಗಳ ಕಟ್ಟೊಂದು ಇರುತ್ತದೆ. ಒಂದೊಂದು ಗರಿಯಲ್ಲೂ ಬೇರೆ ಬೇರೆ ವಿಷಯಗಳನ್ನು ಕುರಿತು ಬರೆದಿರಲಾಗುತ್ತದೆ. ಜ್ಯೋತಿಷ್ಯ ಕೇಳಲು ಬಂದಾತನ ಮುಂದುಗಡೆ ಈ ಗರಿಗಳ ಕಟ್ಟನ್ನು ಇಟ್ಟು ಆತನ ಕೈಯಲ್ಲಿ ಒಂದು ಕಡ್ಡಿಯನ್ನು ಕೊಟ್ಟು ತನ್ನ ಮನಸ್ಸಿಗೆ ಬಂದ ಕಡೆ ಕಟ್ಟಿನ ಮಧ್ಯೆ ಕಡ್ಡಿಯನ್ನು ತೂರಿಸಲು ಹೇಳಲಾಗುತ್ತದೆ. ಆ ಕಡ್ಡಿ ಎಲ್ಲಿ ತೂರಿರುತ್ತದೋ ಅಲ್ಲಿನ ಗರಿಯನ್ನು ಜೋಯಿಸ ಕೈಗೆತ್ತಿಕೊಂಡು ಅದರಲ್ಲಿ ಬರೆದಿರಬಹುದಾದ ವಿಚಾರವನ್ನು ಓದಿ ಹೇಳಿ ವ್ಯಾಖ್ಯಾನಮಾಡಿ ಶುಭ ಅಶುಭಗಳ ಬಗ್ಗೆ ತಿಳುವಳಿಕೆ ಕೊಡುತ್ತಾನೆ.

ಗಿಣಿಶಾಸ್ತ್ರ : ಸಾಮಾನ್ಯವಾಗಿ ಇದೂ ಹೆಚ್ಚು ಕಡಿಮೆ ಮೇಲಿನ ವಿಧಾನದಂತೆಯೆ. ಇದರಲ್ಲಿ ಗಿಣಿ ಪ್ರಮುಖ ಪಾತ್ರವಹಿಸುತ್ತದೆ. ಬಂದವರ ಹಣೆಬರಹವನ್ನು ನಿರ್ಧರಿಸುವುದು ಈ ಗಿಣಿಯೆ. ಜ್ಯೋತಿಷಿಯ ಬಳಿ ಇಪ್ಪತ್ತು ಮೂವತ್ತು ದಪ್ಪ ಕಾಗದದ ಲಕೋಟೆಗಳಿರುತ್ತವೆ. ಒಂದೊಂದರಲ್ಲೂ ಒಂದೊಂದು ದೇವರ ಭಾವಚಿತ್ರವಿದ್ದು ಕೆಲವು ವಾಕ್ಯಗಳನ್ನು ಬರೆದಿರುತ್ತಾರೆ. ಒಳಗೆ ಏನು ಬರೆದಿದೆ ಎನ್ನುವುದು ಹೊರಗಿನಿಂದ ಕಾಣುವುದಿಲ್ಲ. ಜ್ಯೋತಿಷ್ಯ ಹೇಳುವ ಕಾಲಕ್ಕೆ ಪಂಜರದಿಂದ ಹೊರಬಂದ ಗಿಣಿ ಹರಡಿರುವ ಲಕೋಟಿಗಳಲ್ಲಿ ಒಂದನ್ನು ತನ್ನ ಕೊಕ್ಕಿನಿಂದ ಎಳೆದು ಪ್ರತ್ಯೇಕಿಸಿಡುತ್ತದೆ. ಅದನ್ನೆತ್ತಿಕೊಂಡು ಅದರಲ್ಲಿನ ಬರೆಹದಂತೆ ಜೋಯಿಸ ಗಿರಾಕಿಗೆ ಭವಿಷ್ಯ ಏನು ಎಂಬುದನ್ನು ಹೇಳುತ್ತಾನೆ. ಈ ಶಾಸ್ತ್ರದಲ್ಲಿ ಲಕೋಟೆಗಳ ಬದಲಾಗಿ ಒಮ್ಮೊಮ್ಮೆ ಓಲೆಗರಿಗಳನ್ನು ಕಾಣಬಹುದು. ವಿಧಾನ ಮಾತ್ರ ಮೊದಲಿನಂತೆಯೇ. ಓಲೆಗರಿಗಳಾದಲ್ಲಿ ದೇವರ ಪಟವಿರುವುದಿಲ್ಲ.

ಮೇಲೆ ಕಾಣಿಸಿದ ಮೂರು ಬಗೆಯ ಜ್ಯೋತಿಷಿಗಳು ಸಾಮಾನ್ಯವಾಗಿ ಜಾತ್ರೆ, ಸಂತೆ, ಮಾರುಕಟ್ಟೆ ಚೌಕ ಮುಂತಾಗಿ ಜನಸಂದಣಿ ಇರುವ ಕಡೆ ಕಾಣಸಿಗುತ್ತಾರೆ.

ಕೊರವಂಜಿ : ಸಾಮಾನ್ಯವಾಗಿ ಇವರು ಹಳ್ಳಿಗಳಲ್ಲಿ ಹೆಚ್ಚಾಗಿ ಓಡಿಯಾಡುತ್ತಾರೆ. ಕಣಿ ಕೇಳ್ತೀರೇನಮ್ಮ ಕಣಿ ಎಂದು ಸಾರಿಕೊಂಡು ಬೀದಿ ಬೀದಿಗಳಲ್ಲಿ ಸುತ್ತುತ್ತಿರುತ್ತಾರೆ. ಕೇಳಲು ಇಚ್ಛಿಸುವ ಜನಗಳ ಹಸ್ತರೇಖೆಗಳನ್ನು ಗಮನಿಸಿ ಅದಕ್ಕನುಗುಣವಾಗಿ ಆ ವ್ಯಕ್ತಿಯ ಹಿಂದಿನ ಮತ್ತು ಮುಂದಿನ ವಿಚಾರಗಳನ್ನು ವಿವರಿಸುತ್ತಾರೆ. (ನೋಡಿ- ಕೊರವಂಜಿ-1).

ಕುರುಮಾಮ : ಕೊರವಂಜಿಯ ರೀತಿ ಇದರೂ ಅಲೆಮಾರಿ ಜನ. ಕೈಯಲ್ಲಿ ಏಕನಾದ ಹಿಡಿದುಕೊಂಡು 'ರಾಮಾನಂದಂ, ರಾಮಾನಂದಂ, ಮಸ್ತಾನನ್ನ ಗುರುನಾದನ್ನ, ಕೊಂಡದೇವತೆ ಮುಂತಾಗಿ ಹಾಡಿಕೊಂಡು ಬೀದಿ ಬೀದಿ ಸುತ್ತುತ್ತಾರೆ. ಹಸ್ತರೇಖೆಯನ್ನು ಪರೀಕ್ಷಿಸಿ ಜ್ಯೋತಿಷ್ಯ ನುಡಿಯುತ್ತಾರೆ. ನಾವು ಮನಸ್ಸಿನಲ್ಲಿ ಕುರಿತುಕೊಂಡ ವಿಚಾರ ಇಂಥದೇ ಎಂದು ಹೇಳುವ ಚಾಣಾಕ್ಷತನ. ಬುದ್ಧಿವಂತಿಕೆ ಇವರದು. (ನೋಡಿ- ಕುರುಮಾಮ).

ಇವಿಷ್ಟು ಮುಖ್ಯವಾಗಿ ಜನಪದ ಜ್ಯೋತಿಷ್ಯದ ಮುಖ್ಯ ಅಂಗಗಳು. ಇವಲ್ಲದೆ ಕಾಡುಸಿದ್ಧ, ಗೊರವ ಮುಂತಾದವರು ಕೂಡ ಭಿಕ್ಷಾಟನೆಯ ವೇಳೆಯಲ್ಲಿ ಆ ಊರಿಗೆ ಅಥವಾ ಯಾವುದೋ ಮನೆಗೆ ಮುಂದೊದಗಬಹುದಾದ ಗಂಡಾಂತರಗಳನ್ನೋ ಶುಭವನ್ನೋ ಸೂಚಿಸುತ್ತ ತಿರುಗುತ್ತಾರೆ. ಕಾಡುಗೊಲ್ಲರು ಕೂಡಗಣೆ ಊದಿ ಕಣಿ ಹೇಳುತ್ತಾರೆ. ಇಷ್ಟಲ್ಲದೆ ದೇವರು ಕೆಲವರ ಮೆಲೆ ಬಂದು ಇಷ್ಟಾನಿಷ್ಟಗಳನ್ನು ಶುಭಾಶುಭ ಫಲಗಳನ್ನು ಹೇಳುವುದೂ ಉಂಟು. ಇದಂತೂ ಇತ್ತೀಚೆಗೆ ಗ್ರಾಮಾಂತರ ಪ್ರದೇಶಗಳಲ್ಲಿ ವ್ಯಾಪಕವಾಗಿ ಹರಡಿದೆ.										(ಎಸ್.ಇ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ